Monday, 24 October 2011

ಅಲೆಮಾರಿಯ ಕಿರುಯಾತ್ರೆ...

ಅಲೆಮಾರಿಯ ಕಿರು ಯಾತ್ರೆ

ನಾನೇಕೆ ಕಡಲ ತೀರಕ್ಕೆ ಬಂದೆ? ನೆನೆಪಿಲ್ಲ. ಈಗ ತಾನೇ ಮೇಲೆದ್ದು ಬಂದ ಬಾಲಸೂರ್ಯನ ದರುಶನಕ್ಕಂತೂ ಅಲ್ಲ. ಅದೋ! ಸೂರ್ಯನಾಗಲೇ ಎದ್ದು ತನ್ನ ಪ್ರತಿಬಿಂಬವನ್ನು ನೋಡುತ್ತಿದ್ದಾನೆ...ನಾನು ದಾರಿ ತಪ್ಪಿದವನಂತೆ ನನ್ನ ಮುಂದಿರುವ ಹೆಜ್ಜೆ ಗುರುತುಗಳನ್ನು ಅನುಸರಿಸಿ ನಡೆಯುತ್ತಿದ್ದೇನೆ.ಆದರೆ ಅದೇನೋ ಗೊಂದಲ! ಒಂದು ಹೆಜ್ಜೆ ಗುರುತಿದ್ದರೆ ಸರಿ..ಇಲ್ಲಿ ಸಾವಿರ ಹೆಜ್ಜೆ ಗುರುತುಗಳು ಕಾಣುತ್ತಿವೆ.

ಈಗಷ್ಟೇ ನಾನು ಪ್ರಪಂಚ ನೋಡುತ್ತಿದ್ದೇನೆ. ಸುತ್ತಲೂ ಬೇರೆ ಬೇರೆ ವಯಸ್ಸಿನ ಮುಖವಾಡಗಳು. ಕಣ್ಣಿಗೆ ಕಾಣುವ ಈ ಮುಖವಾಡಗಳನ್ನು ಮನುಷ್ಯರೆಂದು ಕರೆಯಬಹದು.ಹಾಗಾದರೆ ನಾನು ಯಾರೆಂದು ಕೇಳಬೇಡಿ ಸ್ವಾಮಿ! ನನ್ನನ್ನು ನಾನೆಂದೋ ಕಳೆದುಕೊಂಡು ಮನುಷ್ಯನಂತೆ ಕಾಣುವ ಮುಖವಾಡವೊಂದನ್ನು ಧರಿಸಿರುವುದರಿಂದ ನಿಮ್ಮ ಕಣ್ಣಿಗೆ ನಾನೂ ಮನುಷ್ಯನೇ!

ಕಡಲಿನ ಹುಚ್ಚು ಅಲೆಗಳ ಏರುಪೇರಿಗೂ ಈ ಮನಸ್ಸಿನ ಏರಿಳಿತಗಳಿಗೂ ಅದೇನೋ ಸಾಮ್ಯತೆ.ಎಲ್ಲಿ ನೋಡಿದರೂ ಬದುಕೆಂಬ ಹುಚ್ಚು ಕನಸಲ್ಲಿ ಬಳಲಿ ಬೆಂಡಾಗಿ ತಮ್ಮನ್ನು ತಾವೇ ಹೊಸ ಮುಖವಾಡಗಳಲ್ಲಿ ಮುಚ್ಚಿಕೊಳ್ಳಲು ಕಡಲ ತೀರಕ್ಕೆ ಬಂದವರು.

ಮುಖವಾಡ ಮಾರುವವನಾರೋ ಗೊತ್ತಿಲ್ಲ. ಆದರೆ ಮುಗಿಬಿದ್ದು ಕೊಳ್ಳುವವರಲ್ಲಿ ನಾನೂ ಒಬ್ಬ. 

ದೈಹಿಕವಾಗಿ ಬಳಲಿದವರಿಗೆ ಇಲ್ಲಿ ಆರೋಗ್ಯ ಎಂಬ ಮುಖವಾಡ ದೊರೆಯುತ್ತದೆ. ಮಾನಸಿಕವಾಗಿ ಬಳಲಿದವರಿಗೆ ಇಲ್ಲಿ ನೆಮ್ಮದಿ ಎಂಬ ಮುಖವಾಡ ದೊರೆಯುತ್ತದೆ.

ಹಾಗಾದರೆ, ಈ ಅಲೆಮಾರಿಗೆ ಮುಖವಾಡ ಬಿಟ್ಟು ಇಲ್ಲಿ ಬೇರೇನೂ ಸಿಗಲಿಲ್ಲವೇ? ಸಿಕ್ಕವು. ಮುಖವಾಡಗಳೇ ಇಲ್ಲದ ಮುದ್ದು ಮನಸುಗಳು. ಆ ಮುದ್ದು ಮನಸುಗಳಿಗೆ ಕಂಗಳ ತುಂಬಾ ನೂರಾರು ಕನಸುಗಳು. ಆ ಮುಗ್ಧ ಮನಸುಗಳನ್ನು ಕಂಡಾಗ ಮುಖವಾಡಗಳೇಕೆ ನಮ್ಮ ಮುಖಗಳೇ ಸಾಕಲ್ಲ ಎಂದನಿಸಿತು. ಕಲ್ಮಶವಿಲ್ಲದ ಆ ಹೃದಯ ಬೇಕನಿಸಿತು...ನಾನೇಕೆ ಕಡಲ ತೀರಕ್ಕೆ ಬಂದೆ ಎಂಬುದು ನೆನಪಾಯಿತು...   

No comments:

Post a Comment